"ಕುಣಿಗಲ್ ತಾಲೂಕಿನಿಂದ ವಿಧಾನಸಭಾ ಸದಸ್ಯನಾಗಿ ಆಯ್ಕೆಯಾದಾಗಿನಿಂದಲೂ ನನ್ನ ತುಡಿತ ಹಾಗೂ ಎದೆಯ ಬಡಿತ ಒಂದೇ ಆಗಿದೆ; ನನ್ನ ಜನರಿಗೆ ಇನ್ನಷ್ಟು... ಮತ್ತಷ್ಟು ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎನ್ನುವುದು."
-ಬಿ.ಬಿ.ರಾಮಸ್ವಾಮಿ ಗೌಡ

"ತಮ್ಮ ಪಕ್ಷದವರಲ್ಲದ ಶಾಸಕರು ಇರುವ ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಯ ವಿಷಯವನ್ನು ರಾಜ್ಯ ಸರ್ಕಾರವು ನಿರ್ಲಕ್ಷಿಸುತ್ತಿದೆ. ಮಾಡುವುದಾಗಿ ಹೇಳಿದ ಕೆಲಸಗಳನ್ನು ಮಾಡುವಲ್ಲಿಯೂ ವಿಳಂಬ ನೀತಿ ಅನುಸರಿಸುತ್ತಿದೆ. ಈ ರೀತಿಯಲ್ಲಿ ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರಗಳಲ್ಲಿ ಏನೂ ಕೆಲಸವೇ ಆಗುತ್ತಿಲ್ಲ ಎನ್ನುವ ಭಾವನೆಯನ್ನು ಜನರ ಮನದಲ್ಲಿ ಮೂಡಿಸುವ ಪ್ರಯತ್ನ ನಡೆಸಿದೆ."
-ಬಿ.ಬಿ.ರಾಮಸ್ವಾಮಿ ಗೌಡ

"ಕಾಂಗ್ರೆಸ್ ನನ್ನ ಹೆತ್ತತಾಯಿ. ರಾಜಕೀಯ ಕ್ಷೇತ್ರದಲ್ಲಿ ನಾನು ಕೂಸಾಗಿ ಕಣ್ಣು ಬಿಟ್ಟಿದ್ದೇ ಕಾಂಗ್ರೆಸ್ ಪಕ್ಷದಲ್ಲಿ. ಆದ್ದರಿಂದ ಈ ಪಕ್ಷವೇ ನನ್ನ ಹೆತ್ತಮ್ಮ. ಹೋರಾಟದ ಹಾದಿಯಲ್ಲಿ ನಡೆಯುವುದನ್ನು ಕಲಿಸಿದ ಹಾಗೂ ಜನಸೇವೆಗಾಗಿ ಯೋಚನೆ ಮಾಡುವ ಮತ್ತು ದುಡಿಯುವ ಪಾಠವನ್ನು ಕಲಿಸಿದ ಮೊದಲ ಗುರುವೂ ಹೌದು. ಸೋಲಿನ ಕಹಿಯನ್ನು ಉಂಡಾಗ ಸಾಂತ್ವನ ಹೇಳಿದ ಹಾಗೂ ಗೆದ್ದು ಸಂಭ್ರಮಿಸಿದಾಗ ಜನರ ಹಿತಕ್ಕಾಗಿ ಸ್ಪಂದಿಸುವಂತೆ ಸರಿಯಾದ ದಾರಿ ತೋರಿಸಿದ ಈ ಮಹಾತಾಯಿಯನ್ನು ಎಂದೂ ಬಿಟ್ಟು ಹೋಗಲು ಸಾಧ್ಯವಿಲ್ಲ."
-ಬಿ.ಬಿ.ರಾಮಸ್ವಾಮಿ ಗೌಡ

"ಬೆಲೆ ಏರಿಕೆ ವಿರುದ್ಧ ಬಿ.ಜೆ.ಪಿ. ಸೇರಿದಂತೆ ಇತರ ಪಕ್ಷಗಳು ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಯು ಬರೀ ಬೂಟಾಟಿಕೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧದ ಪ್ರತಿಭಟನೆ ಎನ್ನುವ ನೆಪದಲ್ಲಿ ಕೇವಲ ಕೃಷಿ ಉತ್ಪನ್ನಗಳ ಬಗ್ಗೆ ಮಾತನಾಡುತ್ತಿದ್ದಾರೆ. ಅವರ ಈ ಮಾತುಗಳು ರೈತ ವಿರೋಧಿ ಎನಿಸುತ್ತವೆ ಎನ್ನುವುದನ್ನು ಅವರು ಸ್ಪಷ್ಟವಾಗಿ ಅರಿಯುವುದು ಒಳಿತು."
-ಬಿ.ಬಿ.ರಾಮಸ್ವಾಮಿ ಗೌಡ

"ರೈತರಿಗೆ ಬೆಳೆದ ಬೆಳೆಗೆ ತಕ್ಕ ಬೆಲೆ ಸಿಗುವಂಥ; ಸಾಮಾನ್ಯ ಜನರಿಗೆ ಮೆಚ್ಚುಗೆ ಆಗುವ ರೀತಿಯಲ್ಲಿ ಅಗತ್ಯ ವಸ್ತುಗಳು ಸಿಗುವಂತೆ ಮಾಡುವ ಮಾರ್ಗವೊಂದು ಖಂಡಿತ ಇದೆ. ಆದರೆ ಆ ಬಗ್ಗೆ ಯೋಚನೆ ಮಾಡುವುದು ಕೇವಲ ಕೇಂದ್ರ ಸರ್ಕಾರದಿಂದ ಮಾತ್ರ ಸಾಧ್ಯವಿಲ್ಲ. ಅದಕ್ಕೆ ರಾಜ್ಯ ಸರ್ಕಾರಗಳೂ ತಮ್ಮ ಕೊಡುಗೆ ನೀಡುವುದು ಅಗತ್ಯವೂ ಅಗಿದೆ."
-ಬಿ.ಬಿ.ರಾಮಸ್ವಾಮಿ ಗೌಡ

"ದೇಶದ ನೈಸರ್ಗಿಕ ಸಂಪತ್ತನ್ನು ಬ್ರಿಟಿಷರು ಆಗ ಮಂದಗತಿಯ ರೈಲು, ವಾಹನ, ಎತ್ತಿನ ಗಾಡಿ... ಹೀಗೆ ನಿಧಾನ ಸಾರಿಗೆಯ ಮೂಲಕ ಸಾಗಿಸುತ್ತಿದ್ದರು. ಆದ್ದರಿಂದ ಬ್ರಿಟಿಷರು ಭಾರಿ ಪ್ರಮಾಣದಲ್ಲಿ ನಮ್ಮ ಸಂಪತ್ತನ್ನು ಹೊತ್ತು ಹೊರಗೆ ಸಾಗಿಸಲು ಸಾಧ್ಯವಾಗಲಿಲ್ಲ. ಆದರೆ ಇಂದು ಏನಾಗುತ್ತಿದ್ದೆ? ನಮ್ಮವರೇ ದಿನವೊಂದಕ್ಕೆ ಸಾವಿರಾರು ಲಾರಿಗಳಷ್ಟು ಅದಿರನ್ನು ಎತ್ತಿ ಸಾಗಿಸುತ್ತಿದ್ದಾರೆ."
-ಬಿ.ಬಿ.ರಾಮಸ್ವಾಮಿ ಗೌಡ

"ಗಣಿಗಾರಿಕೆಯನ್ನೇ ನಿಷೇಧಿಸುವ ಮುಖ್ಯಮಂತ್ರಿಯವರ ತೀರ್ಮಾನವು ಹಾಸ್ಯಾಸ್ಪದವಾಗಿದೆ. ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರಂತೆ ಹಾಗೆ ಆಗಿದೆ. ನಿಷೇಧವು ಖಂಡಿತವಾಗಿ ಪರಿಹಾರವಲ್ಲ."
-ಬಿ.ಬಿ.ರಾಮಸ್ವಾಮಿ ಗೌಡ

"ಗಾಯಗೊಂಡಿರುವ, ವಯಸ್ಸಾಗಿರುವ ಹಾಗೂ ಅಂಗವಿಕಲವಾಗಿರುವ ಕಾಡಾನೆಗಳು ಹಾಗೂ ಸಾಕಾನೆಗಳನ್ನು ನೋಡಿಕೊಳ್ಳುವುದಕ್ಕೆ ಕರ್ನಾಟಕದಲ್ಲಿ "ಆನೆಗಳ ಪುನರ್ವಸತಿ ಕೇಂದ್ರ"ವೊಂದನ್ನು ಸ್ಥಾಪಿಸುವುದು ಅಗತ್ಯವಾಗಿದೆ."
-ಬಿ.ಬಿ.ರಾಮಸ್ವಾಮಿ ಗೌಡ